ಈ ಜಗತ್ತಿನಲ್ಲಿ ಜಗಳವಾಡದ ದಂಪತಿಗಳೇ ಇಲ್ಲ. ಹಾಗೆಂದ ಮಾತ್ರಕ್ಕೆ ಜಗಳ ಎಲ್ಲಾ ದಂಪತಿಗಳಲ್ಲಿಯೂ ಸುಖಾಂತ್ಯವೇ ಆಗುತ್ತದೆ ಎಂಬುದನ್ನೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಎಷ್ಟೋ ದಂಪತಿಗಳ ನಡುವೆ ವಿರಸವಿದ್ದರೂ ಹೊರಜಗತ್ತಿಗೆ ಗೊತ್ತಾಗಬಾರದೆಂದು ಸುಖವಾಗಿರುವ ಮುಖವಾಡ ಧರಿಸಿ ಏನೂ ಆಗಿಲ್ಲವೆಂಬಂತೆ ಇರುತ್ತಾರೆ.
ಕೆಲವು ಪ್ರತ್ಯೇಕ ಕುಟುಂಬಗಳಲ್ಲಿ ದಾಂಪತ್ಯ ಕೊನೆಗೊಳ್ಳುವ ಸಂಖ್ಯೆಯೂ ಅಪಾರವಾಗಿದೆ. ಅಷ್ಟಕ್ಕೂ ದಾಂಪತ್ಯ ಉಳಿಸುವ ಹಿರಿಯರು ಆದ್ಯತೆ ನೀಡುತ್ತಾರೆ ಹಾಗೂ ಪರಸ್ಪರರು ತಮ್ಮ ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ಪರಸ್ಪರರನ್ನು ಕ್ಷಮಿಸಿ ದಾಂಪತ್ಯದ ಹಿಂದಿನ ಕಹಿ ಕ್ಷಣಗಳನ್ನು ಮತ್ತೆಂದೂ ನೆನಪಿಗೆ ತಾರದಂತೆ ನಡೆದುಕೊಳ್ಳುತ್ತಾ ದಾಂಪತ್ಯದ ಸೊಗಸನ್ನು ಹೆಚ್ಚಿಸುತ್ತಾರೆ. ಇಂದು ಹಿರಿಯರು ಇಲ್ಲದೇ ಇರುವ ದಂಪತಿಗಳು ಈ ಕಾರ್ಯವನ್ನು ತಮ್ಮ ಜವಾಬ್ದಾರಿ ಎಂಬಂತೆ ನಿರ್ವಹಿಸಿಕೊಳ್ಳುವುದು ಅಗತ್ಯವಾಗಿದೆ.
ಕ್ಷಮೆ ಏಕೆ ಅಗತ್ಯ?:
ನೀವು ನಿಮ್ಮ ಸಂಗಾತಿಯ ಜೊತೆಗೆ ಜಗಳ ಮಾಡಿದರೆ ಅವರನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳುದಿಲ್ಲ. ಜಗಳಗಳು ಸುಖಾಂತ್ಯವಾದಷ್ಟೂ ದಾಂಪತ್ಯ ಗಟ್ಟಿಯೇ ಇರುತ್ತದೆ. ಕ್ಷಮೆ ನಿಜಕ್ಕೂ ಆರೋಗ್ಯಕರ ಸಂಬಂಧದ ರಹಸ್ಯ ಎಂದು ಅಧ್ಯಯನಗಳು ಸೂಚಿಸುತ್ತವೆ. ಕ್ಷಮಿಸುವ ಅಭ್ಯಾಸವಿರುವ ದಂಪತಿಗಳು ಎಂದಿಗೂ ಸುಖವಾಗಿರುತ್ತಾರೆ. ಏಕೆಂದರೆ ಅವರು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಪ್ರಯತ್ನಿಸುತ್ತಾರೆ. ಮುತ್ತು ಒಡೆದರೆ ಹೋಯ್ತು ಎಂಬ ಗಾದೆಮಾತಿನಂತೆ ಮನಸ್ಸನ್ನು ಚುಚ್ಚುವ ಮಾತುಗಳು ಗಾಢ ಪರಿಣಾಮ ಬೀರಬಹುದು ಹಾಗು ತುಂಬಾ ನೋವುಂಟು ಮಾಡುತ್ತದೆ. ಆದರೆ ದಾಂಪತ್ಯದ ಕೊನೆಯಾಗುವ ಭಯ ಇರುವವರಿಗೆ ಕ್ಷಮೆ ಸೂಕ್ತವಾದ ಕ್ರಮವಾಗಿದೆ. ತನ್ಮೂಲಕ ದಾಂಪತ್ಯದ ಅಸಮತೋಲನ ಸರಿಯಾಗಲು ಸಾಧ್ಯವಾಗುತ್ತದೆ.
ಕ್ಷಮೆಗೂ ಸಮತೋಲನ ಬೇಕು:
ಯಾವುದೋ ಒಂದು ತಪ್ಪನ್ನು ಒಂದು ಬಾರಿ ಕ್ಷಮಿಸಿದ ಮಾತ್ರಕ್ಕೇ ಈ ತಪ್ಪನ್ನು ಪುನರಾವರ್ತಿಸುವುದು ಸರಿಯಲ್ಲ. ಒಂದು ವೇಳೆ ಮುಂದಿನ ಬಾರಿಯೂ ಇದೇ ತಪ್ಪನ್ನು ಕ್ಷಮಿಸಿದರೆ ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಪ್ರತಿ ಬಾರಿಯೂ ಹೀಗೇ ಮುಂದುವರೆಯುವ ಸಾಧ್ಯತೆ ದಟ್ಟವಾಗಿದೆ. ತಪ್ಪುಗಳನ್ನು ಮತ್ತೆ ಮತ್ತೆ ಪುನರಾವರ್ತಿಸಿದರೆ ಮುರಿದ ಹೃದಯವನ್ನು ಗುಣಪಡಿಸಲು ಧೈರ್ಯ ಮತ್ತು ಮಾನಸಿಕ ಸ್ಥೈರ್ಯದ ಅಗತ್ಯವಿದೆ. ಒಂದು ವೇಳೆ ದಾಂಪತ್ಯದಲ್ಲಿ ಈ ತಪ್ಪಿನ ಹೊರತಾಗಿಯೂ ಪ್ರೀತಿ ಉಳಿದಿದ್ದರೆ ಸಂಗಾತಿ ಆ ತಪ್ಪನ್ನು ಕ್ಷಮಿಸಿಯೇ ಇರುತ್ತಾರೆ. ಏಕೆಂದರೆ ಕೊನೆಯಲ್ಲಿ, ಗೆಲ್ಲುವುದು ಪ್ರೀತಿಯೇ! ಈ ಮೂಲಕ ನಿಮ್ಮ ಸಂಗಾತಿ ತನ್ನ ಅಹಂಭಾವವನ್ನು ತೊಡೆದು ಮುಂದಿನ ದಿನಗಳಲ್ಲಿ ನಿಮಗೆ ಇನ್ನಷ್ಟು ಪ್ರೀತಿ ಪಾತ್ರರಾಗಬಹುದು. ಸಾಮಾನ್ಯವಾಗಿ ಚಿಕ್ಕ ಪುಟ್ಟ ತಪ್ಪುಗಳಿಗೆ ಇವು ಅನ್ವಯವಾಗಬಹುದು.
ಕ್ಷಮೆಯು ವಿಷತ್ವಕ್ಕೆ ಕಾರಣವಾಗಲು ಬಿಡಬೇಡಿ:
ಅವರು ದಿನಾಲೂ ತಪ್ಪು ಮಾಡಿದರೆ ನೀವು ಕ್ಷಮಿಸಬೇಡಿ. ಏಕೆಂದರೆ ಪದೇ ಪದೇ ತಪ್ಪು ಮಾಡಿದರೆ ಅವರಿಗೆ ಇವರು ಪುನಃ ಕ್ಷಮಿಸುತ್ತಾರೆ ಎಂಬ ಆಲೋಚನೆ ಬರುತ್ತದೆ. ಈ ಆಲೋಚನೆಗಳು ಕೆತ್ತಿದಷ್ಟು ಗಾಢವಾಗಿ ಪರಿಣಾಮ ಬೀರುತ್ತದೆ. ಈ ಆಲೋಚನೆಯೇ ಸಂಬಂಧ ಕುಸಿಯುವ ಪ್ರಾರಂಭಿಕ ಹಂತವಾಗಿದ್ದು ಪ್ರತಿ ಬಾರಿಯ ತಪ್ಪಿನೊಂದಿಗೆ ಇನ್ನಷ್ಟು ಮಟ್ಟಿಗೆ ಕುಸಿಯುತ್ತದೆ. ಜನರು ಕ್ಷಮೆಯನ್ನು ಲಘುವಾಗಿ ತೆಗೆದುಕೊಂಡಿದ್ದನ್ನು ತಪ್ಪಾಗಿ ಭಾವಿಸುತ್ತಾರೆ ಮತ್ತು ಅದು ಅವರು ಮಾಡಬಹುದಾದ ದೊಡ್ಡ ತಪ್ಪುಗಳಲ್ಲಿ ಒಂದಾಗಿದೆ, ಅಂದರೆ ಈ ವ್ಯಕ್ತಿಗಳು ಕ್ಷಮೆಗೆ ಅನರ್ಹರಾಗಿದ್ದಾರೆ.
ತಪ್ಪಿತಸ್ಥ ಭಾವನೆ:
ಇದರ ಹೊರತಾಗಿ, ನಿಮ್ಮ ಸಂಗಾತಿ ನಿಮ್ಮನ್ನು ಕ್ಷಮಿಸುವಂತೆ ಇದ್ದರೂ, ತಪ್ಪಿತಸ್ಥ ಭಾವನೆಯಿಂದ ನಿಮ್ಮನ್ನು ನೀವೇ ಕ್ಷಮಿಸಿಕೊಳ್ಳದ ಪರಿಸ್ಥಿತಿ ಎದುರಾದರೆ ಮಾತ್ರ ನಿಮ್ಮನ್ನು ನೀವೇ ಯಾವುದೇ ಶಿಕ್ಷೆ ವಿಧಿಸಿಕೊಂಡರೂ ಸಾಕಾಗುವುದಿಲ್ಲ. ನಿಮ್ಮ ಆತ್ಮಸಾಕ್ಷಿಯು ತಪ್ಪೊಪ್ಪಿಕೊಳ್ಳಬಹುದು ಮತ್ತು ನೀವು ನಿಮ್ಮನ್ನು ಕ್ಷಮಿಸದೇ ಇದ್ದರೆ, ಅದು ಸಹಜವಾಗಿದೆ. ಆದರೆ, ನೀವು ಈ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಆದಷ್ಟು ಬೇಗ ನೇರವಾಗಿ ಮಾತನಾಡಬೇಕು. ಮೊದಲಾಗಿ ನಿಮ್ಮ ತಪ್ಪನ್ನು ನೀವೇ ಒಪ್ಪಿಕೊಂಡು ನಿಮ್ಮನ್ನು ನೀವೇ ಕ್ಷಮಿಸಿ ಈ ತಪ್ಪನ್ನು ಸರಿಪಡಿಸುವತ್ತ ಗಮನ ಹರಿಸಬೇಕು. 'ಸುಳ್ಳು ಸುಳ್ಳೇ ಆದ ಸ್ವ-ಕ್ಷಮೆ' ನಿಮ್ಮ ಮನಸ್ಸನ್ನು ಮತ್ತು ನಿಮ್ಮ ಸಂಬಂಧವನ್ನು ಆಂತರಿಕವಾಗಿ ನಾಶಪಡಿಸುತ್ತದೆ ಎಂದು ಸಂಶೋಧಕರು ತೀರ್ಮಾನಿಸಿದ್ದಾರೆ. ಸುಳ್ಳಿನ ಈ ಮುಖವಾಡ ನೈಜ-ಸಮಯದ ಪ್ರಯೋಜನಗಳನ್ನು ನೀಡುವ ಬದಲು, ಅದು ಸಂಬಂಧದ ಅಡಿಪಾಯವನ್ನ್ನೇ ಶಿಥಿಲವಾಗಿಸಬಹುದು.
ದಂಪತಿಗಳ ನಡುವಣ ಜಗಳದಲ್ಲಿ ಸ್ಪರ್ಧೆಯನ್ನು ಬಿಟ್ಟು ಬಿಡಿ:
ನಿಮ್ಮ ಸಂಗಾತಿ ಗುರುತಿಸಲು ವಿಫಲವಾಗುವಂತಹ ಗುರಿಗಳನ್ನು ನೀವು ಹೊಂದಿರಬಹುದು ಮತ್ತು ಇದರಿಂದಾಗಿ ಸ್ಪಷ್ಟವಾದ ವ್ಯತ್ಯಾಸಗಳ ಬಗ್ಗೆ ನಿಮ್ಮಿಬ್ಬರ ನಡುವೆ ಕಲಹ ಎದುರಾಗಬಹುದು. ಈ ರೀತಿಯ ಸಮಯದಲ್ಲಿ, ಸ್ಪರ್ಧಾತ್ಮಕ ಗುರಿಯ ಬದಲು ಪರಸ್ಪರ ಸಹಕಾರಿಯಾಗಿರುವ ಗುರಿಯನ್ನು ಸಾಧಿಸಲು ಒಟ್ಟಾಗಿ ಕೆಲಸ ಮಾಡುವುದೇ ಉತ್ತಮ. ನಿಮ್ಮ ಸಂಗಾತಿಯೊಂದಿಗೆ ತೃಪ್ತಿದಾಯಕ ತೀರ್ಮಾನಕ್ಕೆ ಬರುವ ಬದಲು ನೀವು ವಾದವನ್ನು ಗೆಲ್ಲಲು ಬಯಸಿದರೆ, ಸಂಬಂಧವನ್ನು ಹಾಳುಮಾಡುವಲ್ಲಿ ನೀವು ದೊಡ್ಡ ಪಾತ್ರವನ್ನು ವಹಿಸುತ್ತಿದ್ದೀರಿ ಎಂದೇ ಹೇಳಬೇಕಾಗುತ್ತದೆ. ವಾದವನ್ನು ಗೆಲ್ಲುವುದೇ ಗುರಿಯಾಗಬಾರದು, ಮತ್ತೆ ಒಗ್ಗೂಡಿಸುವುದು ಗುರಿಯಾಗಿರಬೇಕು. ಇಲ್ಲದಿದ್ದರೆ, ನೀವು ಯುದ್ಧವನ್ನೇನೋ ಗೆಲ್ಲುತ್ತೀರಿ, ಆದರೆ ಸಂಗಾತಿಯನ್ನು ಕಳೆದುಕೊಳ್ಳುತ್ತೀರಿ. ಸಂಬಂಧಗಳು ನಮ್ಮನ್ನು ಬಲಪಡಿಸುತ್ತವೆ, ಆದರೆ ಇನ್ನೊಂದೆಡೆ ತುಂಬಾ ದುರ್ಬಲವೂ ಆಗಿವೆ. ದಂಪತಿಗಳಾಗಿ ಚಿಕ್ಕ ಪುಟ್ಟ ತಪ್ಪುಗಳನ್ನು ಕ್ಷಮಿಸುವುದರಿಂದ ನಿಮ್ಮ ಬಂಧವನ್ನು ಇನ್ನಷ್ಟು ಬಲಪಡಿಸಬಹುದೆಂದರೆ ಕ್ಷಮೆಯನ್ನು ನಂಬಿ. ಆದರೆ, ಒಂದು ದೊಡ್ಡ ಪ್ರಮಾದ ಅಥವಾ ದೋಷವನ್ನು ಕ್ಷಮಿಸುವಂತೆ ನಮ್ಮ ಆತ್ಮಸಾಕ್ಷಿಯನ್ನು ಹಿಂಸಿಸುವುದು ನಿಜವಾಗಿಯೂ ಒತ್ತಡ ಮತ್ತು ಬಳಲಿಕೆಯಾಗಿದೆ. ಪ್ರೀತಿ ಖಂಡಿತವಾಗಿಯೂ ಜಟಿಲವಾಗಿದೆ ಆದರೆ ನಿಮ್ಮ ಸಂಗಾತಿಯೊಂದಿಗೆ ದೀರ್ಘಾವಧಿಯವರೆಗೆ ಕ್ಷಣಗಳನ್ನು ಮತ್ತು ಜೀವನವನ್ನು ಕಳೆಯಲು ನೀವು ದೃಢ ನಿಶ್ಚಯವನ್ನು ಹೊಂದಿದ್ದರೆ, ಕ್ಷಮಿಸುವುದರಿಂದ ನಿಮಗೆ ಸಂತೋಷವಾಗುತ್ತದೆ. ಇದು ನಿಮ್ಮ ಯಶಸ್ವಿ ಸಂಬಂಧ ಅಥವಾ ವಿವಾಹದ ರಹಸ್ಯವಾಗಿರುತ್ತದೆ.